
ಕೆರೆಯಲ್ಲಿ ಅರಣ್ಯ ಇಲಾಖೆ ಕಾರ್ಯಬಾರಕ್ಕೆ ರೈತರ ವಿರೋಧ.
ಗಜೇಂದ್ರಗಡ : ಸತ್ಯ ಮಿಥ್ಯ.(ಜ -17)
ಗಜೇಂದ್ರಗಡ ಇಂಗು ಕೆರೆಯನ್ನು ಅಭಿವೃದ್ಧಿಮಾಡುವ ಉದ್ದೇಶದಿಂದ ಕೊಳವೆ ಬಾವಿಕೊರೆಸಲು ನಿನ್ನೆ ಅರಣ್ಯ ಇಲಾಖೆ ಸಿಬ್ಬಂದಿ ಸಹಿತ ಬೋರ್ ವೆಲ್ ವಾಹನವನ್ನು ಕರೆತಂದಿದ್ದರು.
ಈ ವಿಷಯ ತಿಳಿದು ಭೂಮಿ ಕಳೆದುಕೊಂಡ ಅನೇಕ ರೈತರು ಇಂತಹ ಪ್ರಕ್ರಿಯೇ ನಡೆಸಲು ನಮ್ಮದು ತಕರಾರು ಇದೆ ಎಂದು ವಿರೋಧ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಭೂಮಿ ಕಳೆದುಕೊಂಡ ರೈತರು.ಇಲ್ಲಿ ಇಂಗು ಕೆರೆ ನಿರ್ಮಾಣದಿಂದ ಇನ್ನುಳಿದ ರೈತರ ಬದುಕು ಹಸನಾಗುತ್ತದೆ ಎಂದುಕೊಂಡು ನಾವೂ ಆ ದಿನ ಭೂಮಿಯನ್ನು ನೀಡಿದ್ದೇವೆ. ಅಲ್ಲದೇ ನಮಗೆ ಸರ್ಕಾರ ಸರಿಯಾದ ಪರಿಹಾರ ನೀಡದೆ ಇದ್ದಿದ್ದರಿಂದ ಕೋರ್ಟಿನಲ್ಲಿ ಕೇಸ್ ದಾಖಲಿಸಿದ್ದೇವೆ . ಆ ಕುರಿತು ಹೆಚ್ಚಿನ ಹೋರಾಟಕ್ಕಾಗಿ ನಾವೂ ಸಿದ್ದಕೊಂಡಿದ್ದೇವೆ. ಅರಣ್ಯ ಇಲಾಖೆ ಕಾರ್ಯ ಮಾಡಲು ಸಾಕಷ್ಟು ಗುಡ್ಡದ ಜಾಗವಿದೆ ಅದನ್ನು ಬಿಟ್ಟು ಕೆರೆ ನಡುವೆ ಗಿಡಗಳನ್ನು ನೆಡುವದು ಎಷ್ಟು ಸರಿ. ಇಲ್ಲಿ ಗಿಡಗಳನ್ನು ನೆಡುವದು, ಬೋರ್ವೆಲ್ ಕೊರೆಸುವದು,ಗಾರ್ಡನ ನಿರ್ಮಾಣ, ಆಟದ ಮೈದಾನ ಮಾಡುವುದಾದರೆ ನಮ್ಮ ವಿರೋಧವಿದೆ ಇದಕ್ಕೆ ನೀರಾವರಿ ಇಲಾಖೆ ಒಪ್ಪಿಗೆ ನೀಡಿಲ್ಲ . ಸರ್ಕಾರ ನಮ್ಮ ಫಲವತ್ತಾದ ಭೂಮಿಯನ್ನು ಯಾವ ಉದ್ದೇಶಕ್ಕಾಗಿ ತೆಗೆದುಕೊಂಡಿದೆಯೋ ಅದನ್ನು ಬಿಟ್ಟು ಕೆರೆಯಲ್ಲಿ ಬೇರೆ ಕೆಲಸ ನಡೆಸಿದರೆ ನಮ್ಮ ವಿರೋಧವಿದೆ. ಅಲ್ಲದೇ ಬೇರೆ ಬೇರೆ ಉದ್ದೇಶಗಳಿಗಾಗಿ ಅನೇಕ ಬರಡು ಭೂಮಿಗಳು ಸಿಗುತ್ತವೆ ಅದನ್ನು ಅಭಿವೃದ್ಧಿ ಪಡಿಸಿ. ಇಂಗು ಕೆರೆಯನ್ನು ಬೇರೆ ಉದ್ದೇಶಕ್ಕೆ ಬಳಸುವದಾದರೆ ನಮ್ಮ ಫಲವತ್ತಾದ ಭೂಮಿಯನ್ನು ನಮಗೆ ನೀಡಿ ಎಂದರು.
ರೈತರ ವಿರೋಧದಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ದಾಖಲೆಯೊಂದಿಗೆ ಬರುತ್ತೇವೆ ಎಂದು ವಾಹನ ಸಮೇತ ಮರಳಿ ತೆರಳಿದರು.
ಒಟ್ಟಾರೆ ರೈತರ ಉದ್ದೇಶ ಕೆಳಗಿನ ರೈತರ ಭೂಮಿಗಳ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ ಎಂಬ ಉದ್ದೇಶದಿಂದ ನಮ್ಮ ಫಲವತ್ತಾದ ಭೂಮಿಯನ್ನು ನಾವೂ ಸರ್ಕಾರ ನಿಗದಿ ಪಡಿಸಿದ ಕಡಿಮೆ ಬೆಲೆಗೆ ಕೊಟ್ಟಿದ್ದೇವೆ.ಅದರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸಿದ್ದೇವೆ.ಇಂತಹ ಸಂದರ್ಭದಲ್ಲಿ ಈ ಕೆರೆಯಲ್ಲಿ ದೊಡ್ಡ ದೊಡ್ಡ ರಾಜಕೀಯ ನಾಯಕರು ಕಾನೂನು ಬಾಹಿರವಾಗಿ ಗರಸು ತೆಗೆದಿದ್ದಾರೆ. ರಸ್ತೆ ಅಗಲೀಕರಣ ಸಂದರ್ಭದಲ್ಲಿ ಅದರ ಪಕ್ಕದಲ್ಲಿರುವ ಮರಗಳನ್ನು ತಂದು ಈ ಕೆರೆಯಲ್ಲಿ ಜೆಸಿಬಿ ಗಳಿಂದ ದೊಡ್ಡ ತೆಗ್ಗುಗಳನ್ನು ತೆಗೆದು ಅವುಗಳನ್ನು ನೆಟ್ಟು ಅದಕ್ಕೆ ಸಂಬಂಧಿಸಿದಂತೆ ಲಕ್ಷಾಂತರ ರೂಪಾಯಿ ಬಿಲ್ ಎತ್ತಿದ್ದಾರೆ. ಇಂದು ಯಾವುದೇ ಒಂದು ಮರವು ಚಿಗುರೋಡೆದಿಲ್ಲ, ಕಳೆದ ವರ್ಷ ಇದೆ ಅರಣ್ಯ ಇಲಾಖೆಯವರು ಕೆರೆಯ ತುಂಬೆಲ್ಲ ಅವೈಜ್ಞಾನಿಕವಾಗಿ ಗಿಡಗಳನ್ನು ನೆಟ್ಟರು ಅವುಗಳು ಸಹಿತ ಬೆಳೆದಿಲ್ಲ. ಒಟ್ಟಾರೆ ಕಾನೂನು ಬಾಹಿರ ಚಟುವಟಿಕೆಗಳಿಗೆ ಸರ್ಕಾರಿ ಅಧಿಕಾರಿಗಳು ಪರಸ್ಪರ ಸಹಕಾರ ತತ್ವದಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ.ಮರಳು ಮಾಫಿಯಾಕ್ಕೆ ನಮ್ಮ ಭೂಮಿಯ ಒಡಲಾಳವನ್ನು ಅಗೆದಿರುವು ಕಾಣಬಹುದು .ಆದ್ದರಿಂದ ಇಲ್ಲಿ ಕೆರೆ ಅಭಿವೃದ್ಧಿ ನೆಪದಲ್ಲಿ ಬೇರೆ ಆಯಾಮಗಳು ನಡೆದರೆ ಹೋರಾಟ ಪ್ರಾರಂಭಗೊಳ್ಳುತ್ತದೆ ಎನ್ನುತ್ತಾರೆ ಭೂಮಿ ಕಳೆದುಕೊಂಡ ರೈತರು.
ಈ ಕೂಡಲೇ ನೀರಾವರಿ ಇಲಾಖೆ ಮೇಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ವೀರಬಸಯ್ಯ ಗೌರಿಮಠ, ಶಬ್ಬೀರ ಕಟ್ಟಿಮನಿ, ರಾಜಪ್ಪ ಚಿಟಗಿ, ಪ್ರಕಾಶ ಶಟ್ಟರ, ಸುರೇಶ ಶಟ್ಟರ, ಯಲ್ಲಪ್ಪ ಚಿಟಗಿ, ಭೀಮಶಿ ಚಿಟಗಿ, ಬಾಬು ದಿವಟರ, ದೊಡ್ಡ ಯಲ್ಲಪ್ಪ ಚಿಟಗಿ, ಮುದ್ದಪ್ಪ ಚಿಟಗಿ, ಭೀಮಣ್ಣ ಚಿಟಗಿ, ಸಂತೋಷಕುಮಾರ ಚಿಟಗಿ, ರೇಣವ್ವ ಚಿಟಗಿ, ದುರಗವ್ವ ಚಿಟಗಿ, ಶ್ಯಾವಮ್ಮ ಚಿಟಗಿ ಸೇರಿದಂತೆ ಅನೇಕರು ಇದ್ದರು.
ವರದಿ : ಸುರೇಶ ಬಂಡಾರಿ.