
ಅಂತರರಾಷ್ಟ್ರೀಯ ವಿಜ್ಞಾನ ವಸ್ತು ಪ್ರದರ್ಶನ; ಜಪಾನಿಗೆ ತೆರಳಿದ ಗ್ರಾಮೀಣ ಪ್ರತಿಭೆ.
ಮುಂಡರಗಿ:ಸತ್ಯಮಿಥ್ಯ (ಜೂ-20)
ಸಾರ್ವತ್ರಿಕ ಸಮಸ್ಯೆಗೆ ವೈಜ್ಞಾನಿಕ ಪರಿಹಾರ ಕಂಡು ಹಿಡಿಯುವ ಮೂಲಕ ತಾಲ್ಲೂಕಿನ ಶಿಂಗಟಾಲೂರ ಗ್ರಾಮದ ವೀರಭದ್ರೇಶ್ವರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ರಕ್ಷತಾ ಅಂದಾನಶೆಟ್ಟರ ಚುರ್ಚಿಹಾಳ ಜೂನ್ 21ರವರೆಗೆ ಜಪಾನ್‌ನಲ್ಲಿ ನಡೆಯುವ ಅಂತರರಾಷ್ಟ್ರೀಯ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.
ಶಾಲೆಯ ಬಿಸಿಯೂಟ ವಿತರಣೆ, ಸಾರ್ವಜನಿಕ ಸಭೆ, ಸಮಾರಂಭ, ಧಾರ್ಮಿಕ ಉತ್ಸವ, ಸಾಮೂಹಿಕ ಭೋಜನ ಮೊದಲಾದ ಸಂದರ್ಭಗಳಲ್ಲಿ ಬೃಹತ್ ಪಾತ್ರೆಗಳಲ್ಲಿ ಅಡುಗೆ ಸಾಮಗ್ರಿಗಳನ್ನು ತಯಾರಿಸಲಾಗುತ್ತದೆ. ಪಾತ್ರೆಗಳನ್ನು ಅಡುಗೆ ಮನೆಯಿಂದ ವಿತರಣೆಯ ಸ್ಥಳದವರೆಗೆ ಕೊಂಡೊಯ್ಯುವುದು ಕಷ್ಟದ ಕೆಲಸವಾಗಿದೆ. ಅದರಲ್ಲಿಯೂ ಶಾಲೆಗಳ ಬೃಹತ್ ಪಾತ್ರೆಗಳಲ್ಲಿ ತಯಾರಿಸುವ ಬಿಸಿಯೂಟ ಸಾಗಾಣಿಕೆಯು ಸವಾಲಿನ ಕೆಲಸವಾಗಿದ್ದು, ಅನೇಕ ಸಂದರ್ಭಗಳಲ್ಲಿ ಅಪಘಡಗಳು ಸಂಭವಿಸಿವೆ.
ಈ ಸಮಸ್ಯೆಯನ್ನು ನಿವಾರಿಸುವ ಕುರಿತು ವಿದ್ಯಾರ್ಥಿನಿ ರಕ್ಷತಾ, ‘ಹಾಟ್ ವೆಸಲ್ ಕ್ಯಾರಿಯರ್ ಕಿಟ್’ ಎಂಬ ಒಂದು ಸುಲಭ ಮಾದರಿಯನ್ನು ತಯಾರಿಸಿದ್ದು, ಅದು ಜಪಾನಿನಲ್ಲಿ ಪ್ರದರ್ಶನಗೊಳ್ಳಲಿದೆ. ಅದು ಅಡುಗೆ ಸಾಗಣೆ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಲಿದೆ. ಜೊತೆಗೆ ಎಲ್ಲರೂ ಸುಲಭವಾಗಿ ಅದನ್ನು ಸ್ಥಳೀಯವಾಗಿಯೇ ತಯಾರಿಸಬಹುದಾಗಿದೆ.
ವರದಿ : ಮುತ್ತು ಗೋಸಲ್